ಪೂರ್ವಾಗ್ರಹ - 
ಒಬ್ಬ ವ್ಯಕ್ತಿಯ ಅಥವಾ ಒಂದು ವಸ್ತುವಿನ ವಿಷಯದಲ್ಲಿ ಪೂರ್ಣವಾಗಿ ಪೂರ್ವಪರ ವಿಚಾರ ಮಾಡದೆ ಮೊದಲೇ ಭಾವಿಸಿದಲ್ಲಿ ರೂಪಿಸಿಕೊಂಡ ಒಂದು ನಿರ್ದಿಷ್ಟ ನಿರ್ಣಯ (ಪ್ರಿಜುಡಿಸ್). ಅದು ಆ ವ್ಯಕ್ತಿ ಅಥವಾ ಆ ವಸ್ತುವಿನ ಬಗ್ಗೆ ಅನುಕೂಲವಾಗಿರಬಹುದು ಇಲ್ಲವೆ ಪ್ರತಿಕೂಲವಾಗಿರಬಹುದು. ಹೇಗೂ ಇಂಥ ನಿರ್ಣಯ ಅಪಾಯಕಾರಿಯೇ. ಏಕೆಂದರೆ ಇಂಥ ಅಭಿಪ್ರಾಯದಿಂದ ವ್ಯಕ್ತಿಯ ಅಥವಾ ವಸ್ತುವಿನ ನೈಜಗುಣ ಮರೆಯಾಗುತ್ತದೆ. ಹೀಗೆ ನಿರ್ಣಯಿಸುವುದು ಸರ್ವಥಾ ಹಾನಿಕರ.

ಪೂರ್ವಾಗ್ರಹಕ್ಕೆ ಬಲಿಯಾದ ವ್ಯಕ್ತಿಯ ಎಲ್ಲ ನೈಜಗುಣಗಳು ಮರೆಯಾಗಿ ಪೂರ್ವಗ್ರಹದಿಂದ ಪ್ರೇರಿತವಾದ ಸಲ್ಲದ ಗುಣಗಳೇ ಎದ್ದು ಕಾಣುತ್ತವೆ. ಇಂಥವನ ವಿಚಾರಶಕ್ತಿ ಕುಂದಿದ್ದು, ಆತನ ವಿಚಾರಗಳಿಗೆ ವಿರುದ್ಧವಾದ ವಿಚಾರಗಳು ಎದುರಾದಾಗ, ಅವು ವಾಸ್ತವವಾಗಿ ನಿಜವಿದ್ದರೂ, ಅವನ್ನು ಹಾಗೆಂದು ಪರಿಗ್ರಹಿಸಲಾರದವನಾಗಿರುವನು. ಮನಸ್ಸು ಸತ್ಯವನ್ನು ನೇರವಾಗಿ ನೋಡಲು ನಿರಾಕರಿಸುತ್ತದೆ. ಇವನು ಕಣ್ಣಿದ್ದೂ ಕುರುಡ. ಅಥವಾ ಬಣ್ಣದ ಗಾಜಿನ ಮೂಲಕ ವಿಶ್ವವನ್ನು ನೋಡಿ, ವಿಶ್ವವೆಲ್ಲವೂ ತನಗೆ ಕಂಡುಬರುತ್ತಿರುವ ವರ್ಣದಿಂದಲೇ ಕೂಡಿದೆ ಎಂಬ ಭ್ರಮೆಯಿಂದ ಕೂಡಿದ ವರ್ಣಾಂಧ. ಕಾಮಾಲೆಯಾದವರಿಗೆ ಲೋಕ ಹಳದಿಯಾಗಿ ಕಾಣುವುದಿಲ್ಲವೆ ಹಾಗೆ. ಪೂರ್ವಗ್ರಹವನ್ನು ವೈಯಕ್ತಿಕ ಆಲೋಚನೆ ಎನ್ನಬಹುದು ಅಷ್ಟೆ. ವಿಚಾರಣೆ, ವಿಶ್ಲೇಷಣೆ ಹಾಗೂ ಸಾಮಾಜಿಕ ಟೀಕೆಗಳಿಗೆ ಅದು ಒಳಗಾಗಿರುವುದಿಲ್ಲ. ಪೂರ್ವ ಗ್ರಹದಿಂದಾಗಿ ವಸ್ತುನಿಷ್ಠೆಯೂ ಒಂದು ನಾಣ್ಯದ ಎರಡು ಮುಖಗಳನ್ನು ನೋಡುವ ಸಾಮಥ್ರ್ಯವೂ ಕಣ್ಮರೆಯಾಗುತ್ತವೆ. ಹೀಗಾದಾಗ ಎಂದೋ ಯಾವತ್ತೋ ಹೊಂದಿದ ಅಭಿಪ್ರಾಯಗಳಿಗೆ ಜೋತು ಬೀಳುತ್ತೇವಲ್ಲದೆ, ಅದನ್ನು ಪುನರ್ವಿಮರ್ಶಿಸುವ ತೊಂದರೆಯನ್ನೇ ತೆಗೆದುಕೊಳ್ಳುವುದಿಲ್ಲ. ಇನ್ನೊಂದು ರೀತಿಯ ಬೌದ್ಧಿಕ ಆಲಸ್ಯವೆಂತಲೂ ಹೇಳಬಹುದು.

ಜೀವನದ ದೈನಂದಿನ ವ್ಯವಹಾರದಲ್ಲಿ ಒಂದಷ್ಟು ಪ್ರಮಾಣದಲ್ಲಿ ಪೂರ್ವಾಗ್ರಹ ಸ್ವಾಭಾವಿಕ ಹಾಗೂ ಅತ್ಯವಶ್ಯಕ. ಎಂಥ ವಿಚಾರಪೂರ್ಣ ವ್ಯಕ್ತಿಯೂ ಆಗಾಗ್ಗೆ ಸಹಜ ತರ್ಕವನ್ನು ತಿರಸ್ಕರಿಸುವಲ್ಲಿ ಆನಂದವನ್ನು ಕಾಣುತ್ತಾನೆ. ಪೂರ್ವಾಗ್ರಹ ವೈಯಕ್ತಿಕವಾದಲ್ಲಿ ಅಪಾಯ ಕಡಿಮೆ. ಕೆಲವು ವಾರಗಳ ಬಗ್ಗೆ, ಸಂಖ್ಯೆಗಳ ಬಗ್ಗೆ ಅನೇಕರು ತಮ್ಮವೇ ಆದ ಕುತೂಹಲಕಾರಿ ಪೂರ್ವಾಗ್ರಹಗಳನ್ನೂ ಹೊಂದಿರುವುದೇ ಇದಕ್ಕೆ ನಿದರ್ಶನ. ಆದರೆ, ಪೂವಾಗ್ರಹ ಸಾಮಾಜಿಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಗತಿಗಳಿಗೆ ಆಧಾರವಾದಾಗ ಅಥವಾ ಧ್ಯೇಯವಾದಿಗಳ ಕೈಯಲ್ಲಿ ಅದೊಂದು ಅಸ್ತ್ರವಾದಾಗ, ನಿರಪಾಯಕಾರಿ ಪೂರ್ವಾಗ್ರಹವೂ ಅತ್ಯಂತ ಅಪಾಯಕಾರಿ ಆಯಾಮವನ್ನು ಪಡೆದುಕೊಳ್ಳುತ್ತದೆ.

ಪೂರ್ವಾಗ್ರಹವನ್ನು ಜೀವನದ ಎಲ್ಲ ಕ್ಷೇತ್ರಗಳಲ್ಲೂ ಕಾಣಬಹುದಾಗಿದೆಯಾದರೂ ಎಲ್ಲಕ್ಕಿಂತ ಹೇಯವಾದ್ದೆಂದರೆ ಮತೀಯ ಪೂರ್ವಾಗ್ರಹ. ಅದಕ್ಕೆ ಆ ಮತೀಯರ ಸಾಮೂಹಿಕ ನಡತೆ, ಗುಣಗಳೇ ಕಾರಣ. ಕೆಲವು ಸಮಯ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಂಗತಿಗಳು ಮತೀಯ ಪೂರ್ವಾಗ್ರಹಗಳನ್ನು ಬಲಗೊಳಿಸುತ್ತವೆ. 

ವಾಲ್ಷ್ ಮತ್ತು ಫ್ಯುರೆರಿ ಎಂಬಿಬ್ಬರು ಮನಶ್ಯಾಸ್ತ್ರಜ್ಞರು ಹೇಳಿರುವಂತೆ ಪೂರ್ವಾಗ್ರಹ ಸಹಬಾಳ್ವೆಗೆ, ಪರಸ್ಪರ ಇರಬೇಕಾದ ಸಹಾನುಭೂತಿಗೆ ಅಡ್ಡಬಂದು ಪೂರ್ವಾಗ್ರಹ ಪೀಡಿತನನ್ನು ಅಸುಖಿಯಾಗಿ ಮಾಡುತ್ತದೆ. 

ವ್ಯಕ್ತಿ ಪೂರ್ವಾಗ್ರಹಗಳನ್ನು ತನ್ನ ಸ್ವಂತ ಜೀವನದಲ್ಲಿಯ ಅನುಭವಗಳ ಮೂಲಕ ಅಥವಾ ಇತರರ ಜೀವನದಲ್ಲಿನ ಅನುಭವಗಳನ್ನು ನೋಡಿ ಬೆಳೆಸಿಕೊಳ್ಳಬಹುದು. ಅನುಭವಗಳು ತೀಕ್ಷ್ಣವಾಗಿದ್ದಷ್ಟು ಪೂರ್ವಾಗ್ರಹಗಳೂ ಅಷ್ಟೇ ಪ್ರಬಲವಾಗಿ ಮೂಡಿಬರುತ್ತವೆ. ಅದರ ಜೊತೆಗೆ ಜೀವನ ರೂಪುಗೊಳ್ಳುವ ಕಾಲವಾದ ಕಿಶೋರಾವಸ್ಥೆಯಲ್ಲಿ ಓದುವ ಪುಸ್ತಕಗಳು, ಆಡಿದ ಆಟದ ಸಾಮಾನುಗಳು, ತಂದೆ ತಾಯಿಗಳು ಮತ್ತು ಉಪಾಧ್ಯಾಯರು-ಈ ಮೊದಲಾದವು ಪೂರ್ವಾಗ್ರಹಗಳ ಬೆಳವಣಿಗೆಯಲ್ಲಿ ಮಹತ್ತ್ವದ ಪಾತ್ರವನ್ನು ವಹಿಸುತ್ತವೆ. ದುರದೃಷ್ಟದ ಸಂಗತಿ ಎಂದರೆ ವಿವೇಚನಾ ಶಕ್ತಿಯನ್ನು ಬೆಳೆಸಿಕೊಂಡ ತರುಣರು ಕೂಡ ಪೂರ್ವಾಗ್ರಹ ಪೀಡನೆಗೆ ಬಲಿಯಾಗಿರುತ್ತಾರೆ. 

ಮತ ಮತಗಳ ನಡುವೆ ಹೇಗೋ ಹಾಗೆ ಗುಂಪು ಗುಂಪುಗಳ ನಡುವೆ, ಅಜ್ಞಾನದಿಂದ, ತಾವೇ ಅತಿಶ್ರೇಷ್ಠ ಎಂಬ ಮನೋಭಾವದಿಂದ ಪೂವಾಗ್ರಹಗಳು ಬಲಗೊಳ್ಳುವುದುಂಟು. ಉದಾಹರಣೆಗೆ ಭಾರತೀಯರು ದೇವಸ್ಥಾನದ ಒಳಗೆ ಪಾದರಕ್ಷೆಯನ್ನು ಬಳಸುವುದಿಲ್ಲ. ಆದರೆ, ಕ್ರಿಶ್ಚನ್ನರು ಬಳಸುತ್ತಾರೆ. ಇದೇ ರೀತಿ ಭಾರತೀಯರಿಗೆ ಗೋಮಾಂಸ ನಿಷಿದ್ಧ, ಮುಸಲ್ಮಾನರಿಗೆ ಹಂದಿ ಮಾಂಸ ನಿಷಿದ್ಧ - ಇತ್ಯಾದಿ. ಇಂಥ ಕ್ಷುಲ್ಲಕ ವಿಷಯಗಳೇ ಮುಂದೆ ಪೂರ್ವಾಗ್ರಹಗಳಿಗೆ ಕಾರಣವಾಗಿ ಮಾನವೀಯ ವ್ಯವಹಾರಗಳು ಕಷ್ಟದಾಯಕವಾಗುತ್ತವೆ. ಇಂಥ ಸಂದರ್ಭಗಳಲ್ಲಿ ಸಾಮಾಜಿಕ ವ್ಯವಹಾರಗಳು ಪೂರ್ವಾಗ್ರಹಗಳನ್ನು ಹೋಗಲಾಡಿಸುವುದರಲ್ಲಿ ಸಹಾಯಕವಾಗಿರುತ್ತವೆ. 

ಪೂರ್ವಾಗ್ರಹಗಳಿಗೆ ಆರ್ಥಿಕ ಹಿನ್ನೆಲೆಯೂ ಉಂಟು. ವರ್ಣದ್ವೇಷವಿರುವ ಯಾವುದೇ ದೇಶವನ್ನು ತೆಗೆದುಕೊಂಡರೂ ಈ ಅಂಶ ಸ್ಪಷ್ಟವಾಗುತ್ತದೆ. ಅಮೆರಿಕದ ಸಂಯುಕ್ತ ಸಂಸ್ಥಾನದ ನೀಗ್ರೋಗಳೇ ಇದಕ್ಕೆ ನಿದರ್ಶನ. ಅವರ ಜೀವನಮಟ್ಟ ಉತ್ತಮವಿದ್ದ ಪಕ್ಷದಲ್ಲಿ, ಅಮೆರಿಕನ್ನರಿಗೆ ಕೂಲಿಯಾಳುಗಳ ಸಮಸ್ಯೆ ತಲೆದೋರುತ್ತಿತ್ತು. ಆದುದರಿಂದ ಬಿಳಿಯರು ಕರಿಯರಿಗೆ ಯಾವುದೇ ರೀತಿಯ ಸವಲತ್ತುಗಳನ್ನಾಗಲಿ ಸೌಲಭ್ಯಗಳನ್ನಾಗಲಿ ಕೊಡದೆ ಅಜ್ಞಾನದಲ್ಲಿ ಇರಿಸಿದ್ದರು. ಸಮಾಜದ ಆರ್ಥಿಕ ವ್ಯವಸ್ಥೆ ಬದಲಾದಾಗ ಎಲ್ಲರಿಗೂ ಸಮಾನ ಅವಕಾಶಗಳು ಲಭ್ಯವಾದಾಗ ವರ್ಣದ್ವೇಷವು ಅದಕ್ಕೆ ಸಂಬಂಧಿಸಿದ ಪೂರ್ವಾಗ್ರಹಗಳು ತಾವಾಗಿಯೇ ಮಾಯವಾಗುತ್ತವೆ. 

ಪೂವಾಗ್ರಹಕ್ಕೆ ಗುಂಪು ಮತ ಇತ್ಯಾದಿಗಳಂತೆ ವ್ಯಕ್ತಿಯೂ ಒಂದು ಪ್ರಬಲ ಕಾರಣ ಎಂಬ ಮಾತನ್ನು ಮರೆಯುವಂತಿಲ್ಲ. ಮನೋರಥ ಈಡೇರದಾಗ ವ್ಯಕ್ತಿ ಇತರ ವ್ಯಕ್ತಿಗಳ ಘಟನಾವಳಿಗಳ ಬಗ್ಗೆ ಪೂರ್ವಾಗ್ರಹಪೀಡಿತ ವಿವರಗಳನ್ನು ಕೊಟ್ಟು ಏನಕೇನ ಪ್ರಕಾರೇಣ ತಾನು ಗೆಲ್ಲಲು ಪ್ರಯತ್ನಿಸುತ್ತಾನೆ.

ಪೂರ್ವಾಗ್ರಹಕ್ಕೆ ಸಂಬಂಧಪಟ್ಟ ಇನ್ನೊಂದು ವಾದವೆಂದರೆ ಬಲಿಪಶುವಾದ. ಹಿಂದಿನ ಕಾಲದಲ್ಲಿ (ಇಂದೂ ಸಹ ವಾಡಿಕೆಯಲ್ಲಿದೆ) ತಮಗೆ ಒಳ್ಳೆಯದಾಗಲು ಕೆಟ್ಟದಾಗದಿರಲು ಅಥವಾ ಪಾಪಗಳಿಂದ ಮುಕ್ತಿ ಪಡೆಯಲು ದೇವತೆಗಳಿಗೆ ಪ್ರಾಣಿಗಳನ್ನು ಬಲಿ ಕೊಡುತ್ತಿದ್ದರು. ಬಲಿ ಕೊಡುವ ಮುನ್ನ ತಮ್ಮ ಪಾಪಗಳನ್ನೆಲ್ಲ ಆ ಪ್ರಾಣಿಗೆ ಆರೋಪಿಸುತ್ತಿದ್ದರು. ಆ ಪ್ರಾಣಿಗೆ ಬಲಿಪಶು ಎಂದು ಹೆಸರು. ಇದೇ ರೀತಿಯಲ್ಲೇ ವ್ಯಕ್ತಿಗಳು ತಮ್ಮಲ್ಲಿಯ ದೋóಷಗಳನ್ನೂ ತಪ್ಪುಗಳನ್ನೂ ನಿರಪರಾಧಿಗಳು ಹಾಗೂ ಸರಳ ಸ್ವಭಾವದವರಿಗೆ ಆರೋಪಿಸಿ ಅವರ ಮೇಲೆ ತಮ್ಮ ಸೇಡನ್ನು ತೀರಿಸಿಕೊಳ್ಳುತ್ತಾರೆ. ಇದಕ್ಕೆ ತಮ್ಮ ಪೂರ್ವಾಗ್ರಹಗಳನ್ನು ಮತ್ತೊಬ್ಬರಿಗೆ ವರ್ಗಾಯಿಸುವುದೇ ಕಾರಣವಾಗಿರುತ್ತದೆ. ಪೂರ್ವಾಗ್ರಹಕ್ಕೆ ಸಂಬಂಧಿಸಿದಂತೆ, ನಮ್ಮ ಬಲಿಪಶು ಸಾಮಾನ್ಯವಾಗಿ ನಮಗಿಂತ ಭಿನ್ನವಾದ ಗುಂಪಿನವರೇ ಆಗಿರುತ್ತಾರೆ.
 
ಪೂವಾಗ್ರಹದ ಹಿಂದಿರುವ ಮತ್ತೊಂದು ಮುಖ್ಯವಾದ ಮನಶ್ಯಾಸ್ತ್ರೀಯ ಪ್ರಚೋದಕವೆಂದರೆ ಪ್ರತಿಬಿಂಬನವಾಗಿದೆ. ಬೇರೆಯವರಲ್ಲಿಲ್ಲದ, ನಮ್ಮದೇ ಆದ ಗುಣದೋಷಗಳನ್ನೂ ಲಕ್ಷಣಗಳನ್ನೂ, ಪ್ರೇರಣೆಗಳನ್ನೂ ಇತರರಿಗೆ ಆರೋಪಿಸುವುದಕ್ಕೆ ಪ್ರತಿಬಿಂಬನ ಎಂದು ಹೆಸರು. ನ್ಯಾಯವಾಗಿ ದೊರಕಬೇಕಾದದ್ದು ದೊರಕದೇ ಹೋಗಿ ಅದು ಅನ್ಯರ ಪಾಲಿಗೆ ಹೋದಾಗ ಅವರನ್ನು ದ್ವೇಷಿಸಲು ತೊಡಗುತ್ತೇವೆ. ಯಾರು ಪೂರ್ವಾಗ್ರಹ ಪೀಡನೆಯಿಂದ ಕೂಡಿರುತ್ತಾರೋ ಅವರಿಗೆ ತಾವು ಮಾಡುತ್ತಿರುವುದು ತಪ್ಪೆಂದು ತಿಳಿದಿರುತ್ತದೆ. ಅವರು ತಮ್ಮ ವರ್ತನೆಯಿಂದ ಇತರರ ಜೀವನವನ್ನು ಶೋಚನೀಯವಾಗಿ ಮಾಡುತ್ತಾರೆ. 

ಪೂರ್ವಾಗ್ರಹ ರೂಪುಗೊಳ್ಳುವುದರಲ್ಲಿ ಈರ್ಷೆಯ ಪಾತ್ರ (ವಿಶೇಷವಾಗಿ ಲೈಂಗಿಕ ಕ್ಷೇತ್ರದಲ್ಲಿ) ಬಹು ಮುಖ್ಯವಾಗಿದೆ. ಲೈಂಗಿಕ ಸಾಮಥ್ರ್ಯದಲ್ಲಿ ಪಾಶ್ಚಾತ್ಯ ಜನಾಂಗದವರಿಗಿಂತ ಪೌರಸ್ತ್ಯ ಜನಾಂಗದವರು ಹೆಚ್ಚು ಉತ್ತಮರು ಎಂಬ ಪೂರ್ವಾಗ್ರಹ ಬಿಳಿಯರು ಇತರ ವರ್ಣೀಯರನ್ನು ದ್ವೇಷಿಸಲು ಕಾರಣವಾಗಿರಬಹುದು.

ಮೈ ಬಣ್ಣ, ಕೂದಲಿನ ಬಣ್ಣ, ಕಣ್ಣಿನ ಬಣ್ಣ, ದೇಹದ ಹೊರ ರಚನೆ ಮುಂತಾದುವಕ್ಕೆ ಸಂಬಂಧಿಸಿದಂತೆ ಹಾಗೂ ಬೌದ್ಧಿಕ ಮಾನಸಿಕ ಸಾಮಥ್ರ್ಯಗಳಲ್ಲಿ ಗಮನಾರ್ಹ ವ್ಯತ್ಯಾಸಗಳಿದ್ದಲ್ಲಿ ತಮಗಿಂತ ಉತ್ತಮರಾದವರನ್ನು ಪೂರ್ವಾಗ್ರಹ ದೃಷ್ಟಿಯಿಂದ ಕೀಳುಗೈಯಲು ಹವಣಿಸುವುದು ಮನುಷ್ಯ ಸ್ವಭಾವ. ಬಿಳಿಯರು ಆಫ್ರಿಕನ್ನರನ್ನು - ಕರಿಯರೆಂದು ಜರಿಯುವುದು, ಪೌರಸ್ತ್ಯರಿಗಿಂತ ಪಾಶ್ಚಾತ್ಯರು ಜಾಣರೆಂದು ಇವರು ಅವರನ್ನು ದ್ವೇಷಿಸುವುದು - ಇವು ಉದಾಹರಣೆಗಳು.

ಪೂರ್ವಾಗ್ರಹ ಒಂದು ದೋಷವಾದರೂ ಆ ಗುಣವುಳ್ಳವರನ್ನು ಯವಾಗಲೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಟೀಕಿಸತೊಡಗಿದರೆ ಅವರು ಇನ್ನಷ್ಟು ಶಠರಾಗುತ್ತಾರೆ ಎಂಬುದು ಆಲ್ಪೋರ್ಟನ ಅಭಿಮತ. ಆದ್ದರಿಂದ ಅಂಥವರ ಮನೋಧರ್ಮವನ್ನು ನಿಧಾನವಾಗಿ ವಿನಯ-ವಿವೇಕಗಳಿಂದ ತಿದ್ದಬೇಕು.

ಅಧಿಕಾರಕ್ಕೆ ಅಂಟಿಕೊಂಡವರಲ್ಲಿ ಒಂದು ಮಾದರಿ ವ್ಯಕ್ತಿತ್ವ ಬೆಳೆದಿರುತ್ತದೆ. ಪ್ರಪಂಚದ ಎಲ್ಲೆಡೆ ಅಪಾಯ ತುಂಬಿದೆ. ಅವುಗಳಿಂದ ಪಾರಾಗಲು ಉಳಿದಿರುವ ಒಂದೇ ಮಾರ್ಗವೆಂದರೆ ಅಧಿಕಾರವನ್ನು ಗಳಿಸುವುದು ಅಥವಾ ಅಧಿಕಾರವಾಣಿಗೆ ವಿಧೇಯರಾಗಿರುವುದು-ಎಂಬ ಮನೋಭಾವನೆ ಅವರದು. ಅದಕ್ಕಾಗಿ ಅವರು ಎಷ್ಟೇ ಚತುರರಾಗಲಿ ತಮ್ಮ ಕೆಳಗಿನವರನ್ನು ಮೂದಲಿಸಿ ದರ್ಪದಿಂದ ತುಳಿಯುತ್ತಾರೆ. ಮೇಲಿನವರು ಎಷ್ಟೇ ಅಸಮರ್ಥರಾಗಿರಲಿ ಅವರನ್ನು ಹೊಗಳುತ್ತಾರೆ. ಇದಕ್ಕೆ ವಿರುದ್ಧ ಅಭಿಪ್ರಾಯವಿರುವ ಇನ್ನೊಂದು ಮಾದರಿ ವ್ಯಕ್ತಿತ್ವದ ಜನರಿದ್ದಾರೆ. ಅವರನ್ನು ಪ್ರಜಾಪ್ರಭುತ್ವವಾದಿ ಮಾದರಿ ಎನ್ನುತ್ತಾರೆ. ಅವರು ಆತ್ಮವಿಶ್ವಾಸದಿಂದ ಕೂಡಿದವರಿದ್ದು, ಇಡೀ ವಿಶ್ವ ಸುಂದರವೂ ಸ್ನೇಹಮಯವೂ ಇದ್ದು ಇಂಥ ವಿಶ್ವದಲ್ಲಿ ಸುರಕ್ಷತೆಯಿಂದಿದ್ದು ತಮ್ಮ ಗುರಿಯ ನಿರ್ದೇಶಕರು ತಾವೇ ಎಂಬ ಭಾವನೆಯಿಂದ ನಡೆದುಕೊಳ್ಳುತ್ತಾರೆ. ಇಲ್ಲಿ ಸಂಪ್ರದಾಯಕ್ಕೆ ಜೋತು ಬೀಳುವುದಾಗಲಿ ಅಂಧಾನುಕರಣೆಯಾಗಲಿ ಇರುವುದಿಲ್ಲ; ಬದಲಿಗೆ, ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳುವ ತೆರೆದ ಮನಸ್ಸು ಹಾಗೂ ಮಾರ್ದವತೆ ಇರುತ್ತವೆ. ಶಕ್ತಿಶಾಲಿಗಳಾದರೂ ಮುಂದುವರಿಯಲು ಇತರರನ್ನೆಂದು ಅವರು ತುಳಿಯುವುದಿಲ್ಲ. ಇದು ಎರಿಕ್ ಫ್ರಾಮ್ ಎಂಬ ಮನಶ್ಯಾಸ್ತ್ರಜ್ಞನ ವ್ಯಕ್ತಿತ್ವ ವಿಶ್ಲೇಷಣೆ. 

ವ್ಯಕ್ತಿತ್ವವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು, ಕ್ಯಾಲಿಫೋರ್ನಿಯಾದ ಬಕ್ರ್ಲಿ ವಿಶ್ವವಿದ್ಯಾಲಯದವರು ನಡೆಸಿದ ವ್ಯಾಪಕವಾದ ಸಂಶೋಧನೆಗಳು ಇಂದಿನ ಆಧುನಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಪೂರ್ವಾಗ್ರಹಕ್ಕೆ ಒಳಗಾಗಿರುವ ವ್ಯಕ್ತಿಗಳು ಅಧಿಕಾರಶಾಹಿ ಮಾದರಿ ವ್ಯಕ್ತಿತ್ವದ ಲಕ್ಷಣಗಳನ್ನು ಹೊಂದಿರುವುದನ್ನು ತೋರಿಸಿವೆ. 					(ಎಲ್.ಎನ್.ವಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ